29 May 2026

ದ್ವಿಚಕ್ರ ವಾಹನ ಸವಾರರೇ, ನೀವು ಕಾರು ಮಾಲೀಕರಿಗೆ ಸಹಾಯಧನ ಕೊಡುತ್ತಿದ್ದೀರಾ?


(Courtesy: Vijayavani )

ಬೆಂಗಳೂರು ಕೆ.ಆರ್. ಮಾರ್ಕೆಟ್‌ನಲ್ಲಿ ಇತ್ತೀಚೆಗೆ ಆರಂಭವಾದ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಸ್ವಾಗತಾರ್ಹ. ದಶಕಗಳಿಂದ ಬೆಂಗಳೂರಿನ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾದ ಕೆ.ಆರ್. ಮಾರ್ಕೆಟ್ ಸಮರ್ಪಕ ಪಾರ್ಕಿಂಗ್ ಮೂಲಸೌಕರ್ಯದ ಕೊರತೆಯನ್ನು ಎದುರಿಸುತ್ತಿತ್ತು. ಈಗ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿರುವದು ಸ್ವಾಗತಾರ್ಹ ಹಾಗು ಅಭಿನಂದನೀಯ.

ಆದರೆ ಅಲ್ಲಿನ ಪಾರ್ಕಿಂಗ್ ಶುಲ್ಕದ ಪಟ್ಟಿಯನ್ನು ನೋಡಿದಾಗ ಒಂದು ಕುತೂಹಲಕಾರಿ ಪ್ರಶ್ನೆ ಮೂಡಿತು.

ಒಂದು ಗಂಟೆಯ ಪಾರ್ಕಿಂಗ್‌ಗೆ ದ್ವಿಚಕ್ರ ವಾಹನಕ್ಕೆ ₹15, ಹಾಗು ಕಾರಿಗೆ ₹25 ರೂಪಾಯಿಗಳು. ಮೊದಲ ನೋಟಕ್ಕೆ ಇದು ಸಮಂಜಸವಾಗಿ ಕಾಣಬಹುದು. ಆದರೆ ಸ್ವಲ್ಪ ಯೋಚಿಸಿ ನೋಡಿ. ಒಂದು ಕಾರು ಸಾಮಾನ್ಯವಾಗಿ ದ್ವಿಚಕ್ರ ವಾಹನಕ್ಕಿಂತ ನಾಲ್ಕರಿಂದ ಆರು ಪಟ್ಟು ಹೆಚ್ಚು ಜಾಗವನ್ನು ಆಕ್ರಮಿಸುತ್ತದೆ. ಹಾಗಿದ್ದರೂ ಕಾರಿನ ಶುಲ್ಕ ದ್ವಿಚಕ್ರ ವಾಹನಕ್ಕಿಂತ ಕೇವಲ ₹10 ಮಾತ್ರ ಹೆಚ್ಚು!

ಹಾಗಾದರೆ ಪ್ರಶ್ನೆ ಏನೆಂದರೆ, ಪಾರ್ಕಿಂಗ್ ಶುಲ್ಕವನ್ನು ನಿಗದಿಪಡಿಸುವಾಗ ವಾಹನ ಆಕ್ರಮಿಸುವ ಜಾಗವನ್ನು ಪರಿಗಣಿಸಲಾಗಿದೆಯೇ? ಇದು ವೈಜ್ಞಾನಿಕವೇ? ಇದು ನ್ಯಾಯಯುತವೇ?

ಒಂದು ದ್ವಿಚಕ್ರ ವಾಹನಕ್ಕೆ ಬೇಕಾಗುವ ಜಾಗದಲ್ಲಿ ಹಲವಾರು ಬೈಕ್‌ಗಳನ್ನು ನಿಲ್ಲಿಸಬಹುದು. ಆದರೆ ಶುಲ್ಕದ ವ್ಯತ್ಯಾಸ ಮಾತ್ರ ಅಷ್ಟೇನೂ ಹೆಚ್ಚಿಲ್ಲ.  ವೈಜ್ಞಾನಿಕವಾಗಿ ಹೇಳಬೇಕೆಂದರೆ ಕಾರುಗಳ ವಾಹನ ನಿಲುಗಡೆ ಶುಲ್ಕ ದ್ವಿಚಕ್ರ ವಾಹನಗಳ  ನಾಲ್ಕರಷ್ಟು ಇರಬೇಕು.  ಆದರೆ ಅದು ಕೇವಲ ಎರಡು ಪಟ್ಟು ಹೆಚ್ಚಿದೆ.  ಹೀಗಾಗಿ ದ್ವಿಚಕ್ರ ವಾಹನ ಸವಾರರೇ ಕಾರುಗಳ ಪಾರ್ಕಿಂಗ್‌ಗೆ ಪರೋಕ್ಷವಾಗಿ ಸಹಾಯಧನ ನೀಡುತ್ತಿರುವರೇ ಎಂಬ ಅನುಮಾನ ಮೂಡುತ್ತದೆ.

ಭೂಮಿಯ ಬೆಲೆ ದಿನೇದಿನೇ ಏರುತ್ತಿರುವ ಬೆಂಗಳೂರಿನಲ್ಲಿ, ಪಾರ್ಕಿಂಗ್ ಶುಲ್ಕವು ವಾಹನ ಬಳಸುವ ಜಾಗಕ್ಕೆ ಅನುಗುಣವಾಗಿರಬೇಕಲ್ಲವೇ?

ಇದು ಕೇವಲ ಕೆ.ಆರ್. ಮಾರ್ಕೆಟ್‌ನ ಪ್ರಶ್ನೆಯಲ್ಲ. ರಾಜ್ಯದಾದ್ಯಂತ ಇರುವ ಮಾಲ್‌ಗಳು (ಗರುಡ ಮಾಲ್ ಸಹ), ವಾಣಿಜ್ಯ ಸಂಕೀರ್ಣಗಳು, ಬಸ್ ನಿಲ್ದಾಣಗಳು ಹಾಗು ರೈಲ್ವೆ ನಿಲ್ದಾಣಗಳು, ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿಯೂ ಇದೇ ರೀತಿಯ ಶುಲ್ಕ ವ್ಯವಸ್ಥೆ ಕಂಡುಬರುತ್ತದೆ. ಆದ್ದರಿಂದ ಸರ್ಕಾರ ಮತ್ತು ನಗರ ಯೋಜನಾ ತಜ್ಞರು ಪಾರ್ಕಿಂಗ್ ಶುಲ್ಕ ನಿಗದಿಯ ಮಾನದಂಡಗಳನ್ನು ಮರುಪರಿಶೀಲಿಸುವ ಸಮಯ ಬಂದಿದೆ. ಗೌರವಾನ್ವಿತ ಹೈ ಕೋರ್ಟ್ ಕೊಡ ಈ ವಿಷಯವನ್ನು ಪರಿಶೀಲಿಸಲೆಂದು ಆಶಿಸುವೆ .

ಅಲ್ಲಿಯವರೆಗೆ, ದ್ವಿಚಕ್ರ ವಾಹನ ಸವಾರರು ಹೆಮ್ಮೆಯಿಂದ ಹೇಳಿ ಕೊಳ್ಳಬಹುದು: "ನಾವು ಕೇವಲ ಟ್ರಾಫಿಕ್ ಕಡಿಮೆ ಮಾಡುತ್ತಿರುವುದಷ್ಟೇ ಅಲ್ಲ, ಕಾರುಗಳ ಪಾರ್ಕಿಂಗ್‌ಗೂ ಧನ ಸಹಾಯ ಮಾಡುತ್ತಿದ್ದೇವೆ!" ಎಂದು.